ಪೆರಿಕ್ಲೀಸ್ 
ಕ್ರಿ. ಪೂ. ಸು. 500-429. ಪ್ರಾಚೀನ ಗ್ರೀಸಿನ ಅತ್ಯಂತ ಪ್ರಭಾವಯುಕ್ತ ಮಹಾನಾಯಕರಲ್ಲಿ ಒಬ್ಬ. ವಿದ್ಯಾವಂತ, ಪ್ರಾಜ್ಞ, ಭಾಷಣಕೋವಿದ, ಯುದ್ಧಪಟು, ಕಲೆ ಸಂಸ್ಕøತಿಗಳ ಪೋಷಕ, ರಾಷ್ಟ್ರ ಶಿಲ್ಪಿ, ರಾಷ್ಟ್ರ ಸಂರಕ್ಷಕ, ಮೇಲಾಗಿ ಜನ ಹಿತೈಷಿ, ಉದಾರಿ, ಸಲಿಗೆ ಕೊಡದ ಗುಣ ಗಂಭೀರ. ಸಮಾಹಿತ ಮನಸ್ಕ, ಸಂಯಮಶೀಲ. ಒಮ್ಮೆ ಯಾವನೊ ಅನಾಮಧೇಯ ಕ್ಷುದ್ರನೊಬ್ಬ ಈತನ ಹಿಂದೆ ಮುಂದೆ ಸುತ್ತುತ್ತ ಇವನನ್ನು ಹೀನಾಮಾನ ಬೈಯ್ಯುತ್ತ ಹೋದನಂತೆ. ದಿವಸ ಪೂರ್ತಿ ಅವನಿಗೆ ಅದೇ ಉದ್ಯೋಗ. ಈತನಾದರೊ ಒಂದು ಮಾತನ್ನು ಆಡದೆ ತನ್ನ ನಿತ್ಯ ಕರ್ತವ್ಯಗಳಲ್ಲಿ ನಿರತನಾಗಿದ್ದ. ದಿವಸಾವಸಾನದಲ್ಲಿ ತನ್ನ ಮನೆಗೆ ಹಿಂತಿರುಗಿದಾಗ ಜೊತೆಯಲ್ಲೇ ಬಂದ ಆ ನೀಚ ನಿಂದೆಯನ್ನು ನಿಲ್ಲಿಸಲೇ ಇಲ್ಲ. ಹೊತ್ತಾದ ಮೇಲೆ ಪೆರಿಕ್ಲೀಸ್ ಸೇವಕನೊಬ್ಬನನ್ನು ಕರೆದು 'ಮಷಾಲು ಹೊತ್ತಿಸಿಕೊಂಡು ಆತನನ್ನು ಅವನ ಮನೆಗೆ ಬಿಟ್ಟು ಬಾ ಎಂದನಂತೆ. ಎಪ್ಪತ್ತು ವರ್ಷಗಳ ಜೀವನದಲ್ಲಿ ತನ್ನ ಮನಸ್ಸಮಾಧಾನವನ್ನು ಈತ ಕಳೆದುಕೊಂಡದ್ದು ಒಂದೇ ಒಂದು ಸಾರಿ. ಇಬ್ಬರು ಗಂಡು ಮಕ್ಕಳನ್ನೂ ಕೆಲವೇ ದಿನದ ಅಂತರದಲ್ಲಿ ಪ್ಲೇಗು ನುಂಗಿಬಿಟ್ಟಿತು. ಮೊದಲನೆಯವನಿಗೂ ಇವನಿಗೂ ಆಗುತ್ತಲೇ ಇರಲಿಲ್ಲ. ಆದರೆ, ಎರಡನೆಯವ ಅಚ್ಚುಮೆಚ್ಚಾಗಿದ್ದ. ಅವನ ಶವಕ್ಕೆ ಪುಷ್ಪಹಾರ ಹಾಕುವಾಗ ಪೆರಿಕ್ಲೀಸ್ ಶೋಕವನ್ನು ತಡೆಯಲಾರದೆ ಬಿಕ್ಕಿಬಿಕ್ಕಿ ಅತ್ತುಬಿಟ್ಟ.

	ತಂದೆ ತಾಯಿ ಎರಡು ಕಡೆಯಿಂದಲೂ ಪೆರಿಕ್ಲಿಸ್ ಉನ್ನತ ವಂಶಕ್ಕೆ ಸೇರಿದವ. ಅವನ ತಂದೆ ಕ್ಸಾಂತಿಪಸ್ ಒಂದು ಸಂಗ್ರಾಮದಲ್ಲಿ ಸೇನಾನಿಯಾಗಿದ್ದ. ಕವಿಗಳೂ ದಾರ್ಶನಿಕರೂ ರಾಜಕಾರಣಿಗಳೂ ಅವನ ಮನೆಗೆ ಬಂದು ಹೋಗುತ್ತಿದ್ದರು. ಸುಸಂಸ್ಕøತ ವಾತಾವರಣದಲ್ಲಿ ಪೆರಿಕ್ಲೀಸ್ ಬೆಳೆದ. ಇವನ ಗುರು ಪೈತೊಕ್ಲಿಡೀಸ್; ಸಂಗೀತ ಹೇಳಿಕೊಟ್ಟವ ಡೇಮನ್. ಸಂಗೀತದೊಂದಿಗೆ ತತ್ತ್ವಶಾಸ್ತ್ರವನ್ನೂ ಬೆರೆಸುವುದು ಡೇಮನ್ನನ ಪದ್ಧತಿ. ಜೀನೊ ಎಂಬ ದಾರ್ಶನಿಕನ ಸೂಕ್ಷ್ಮ ವಾದವಿವಾದವನ್ನೂ ಪೆರಿಕ್ಲಿಸ್ ಕಿವಿಗೊಟ್ಟು ಕೇಳಿದ. ಇವನ ಮೇಲೆ ಪ್ರಬಲ ಪ್ರಭಾವವನ್ನು ಬೀರಿದಾತ ಶ್ರೇಷ್ಠ ದಾರ್ಶನಿಕನಾದ ಆನಾಕ್ಸಗೊರಸ್; ಶಿಷ್ಯನ ಶಾಂತಿ ಸೌಮ್ಯತೆ ಗಾಂಭೀರ್ಯವೆಲ್ಲವೂ ಹೆಚ್ಚಾಗಿ ಗುರುವಿನ ಉಪದೇಶ ಉದಾಹರಣೆಗಳ ಸತ್ಫಲ. ತಾರುಣ್ಯದಲ್ಲಿ ಪೆರಿಕ್ಲಿಸ್ ವ್ಯಾಯಮಗಳಲ್ಲಿ ಭಾಗವಹಿಸಿ ಹೆಸರಾದ. ರಾಜಕೀಯಕ್ಕೆ ಪ್ರವೇಶಿಸಲಿಲ್ಲ. ಏತಕ್ಕೆಂದರೆ ತನ್ನ ಉಚ್ಚ ಕುಲ, ವಿಪುಲ ಸಂಪತ್ತು, ಸ್ನೇಹಿತಸಂದೋಹಗಳು ಹಲವರಿಗೆ ಒಡಲುರಿ ತಂದು ಅವರನ್ನು ವೈರಿಗಳಾಗಿಸಬಹುದೆಂಬ ಹೆದರಿಕೆ. ಎರಡನೆಯದಾಗಿ ನಿರಂಕುಶಾಧಿಕಾರಿಯಾಗಿ ಮೆರೆದು ಸತ್ತ ಪೈಸಿಸ್ಟ್ರಟಸ್ಸಿಗೂ ಇವನಿಗೂ ಮುಖತೋರ್ಕೆ, ಇಂಪುದನಿ, ವಾಗ್ಲಹರಿಗಳಲ್ಲಿ ಸಾಮ್ಯವಿದ್ದಿತಾಗಿ ಜನ ಇವನೂ ಒಬ್ಬ ಪೈಸಿಸ್ಟ್ರಟಸ್ ಆದಾನೆಂದು ವಿರೋಧ ಹೂಡಬಹುದೆಂಬ ಅಂಜಿಕೆ. ಆದರೆ, ತೆಮಿಸ್ಟಕ್ಲೀಸ್ ದೇಶ ಭ್ರಷ್ಟನಾದ; ಅರಿಸ್ಟೈಡಿಸ್ ಸತ್ತು ಹೋದ; ಪ್ರಜಾವಾದದ ಪ್ರಗತಿಶೀಲ ಪಕ್ಷಕ್ಕೆ ನಾಯಕರಿಲ್ಲದೆ ಪೆರಿಕ್ಲೀಸ್ ರಾಜಕೀಯಕ್ಕೆ ಇಳಿಯಲೇ ಬೇಕಾಯಿತು. ಇಳಿದ ಮೇಲೆ ಹೊರಬರುವುದಕ್ಕೆ ಆಸ್ಪದ ಸಿಕ್ಕಲೇ ಇಲ್ಲ. 

	ಧರ್ಮ ನೀತಿ ಸುಸಂಸ್ಕøತಿ ದೊಡ್ಡತನ ಉದಾತ್ತ ಧ್ಯೇಯಗಳಿಂದ ಬಾಹಿರವಾದ ರಾಜಕೀಯ ಇವನ ಅಭಿಮತದಂತೆ ರಾಜಕೀಯವೇ ಅಲ್ಲ. ತತ್ತ್ವಶಾಸ್ತ್ರವೇ ಇವನ ಹವ್ಯಾಸ, ಪ್ರೊಟಾಗೊರಸ್, ಫಿಡಿಯಸ್, ಸಾಫೋಕ್ಲೀಸ್, ಹೀರಡಟಸ್ ಮೊದಲಾದ ವಿದ್ವಜ್ಜನರೇ ಇವನ ಸಂಗಡಿಗರು. ಕೈಹಿಡಿದ ಹೆಂಡತಿಗೂ ಇವನಿಗೂ ವೈಷಮ್ಯ ಹುಟ್ಟಿದ್ದರಿಂದ ಅವಳನ್ನು ತ್ಯಜಿಸಿ ಬಂಗಾರದವಳಾದ ಅಸ್‍ಪ್ಯಾಸಿಯಾ ಎಂಬ ಬುದ್ಧಿವಂತಳೂ ಕಲಾವಿದಳೂ ಸುಸಂಸ್ಕøತಳೂ ಜ್ಞಾನಿಯೂ ಆದ ಅಪೂರ್ವ ಮಹಿಳೆಯನ್ನು ಸಹಧರ್ಮಿಣಿಯಂತೆಯೇ ಸ್ವೀಕರಿಸಿದ. ಈತ ರೂಢಿಸಿ ಕಾರ್ಯಗತ ಮಾಡಿದ ಯೋಜನೆಗಳಲ್ಲಿ ಹಲವಕ್ಕೆ ಅವಳ ಸಲಹೆಯೇ ಆಧಾರವಾಗಿತ್ತೆಂದು ಹೇಳಲಾಗಿದೆ. ಪೆರಿಕ್ಲೀಸ್ ಮತ್ತು ಅಸ್‍ಪ್ಯಾಸಿಯಾ ಸಂಬಂಧ ಹಳೆಯದು ಹೊಸದು ಎರಡರ ಸಂಗಮ. ಸಮನ್ವಯ ಸಿದ್ಧಿ, ತನ್ನ ದಿನಚರಿಯನ್ನು ಈತ ತುಂಬ ಜಾಗರೂಕತೆಯಿಂದ ನಿಶ್ಚಯಿಸಿಕೊಂಡ. ವ್ಯಾಯಾಮ ಕ್ರೀಡೆಗಳಿಗೆ ಮನಗೊಡಲಿಲ್ಲ. ನಿವಾಸದಿಂದ ಬಹಿರಂಗ ಸಭೆಗೂ ಮಂತ್ರಾಲೋಚನೆ ಮಂದಿರಕ್ಕೂ ನಡೆದು ಹೋಗುವುದು, ನಿವಾಸಕ್ಕೆ ಹಿಂದಿರುಗುವುದು-ಇಷ್ಟೇ ಇವನ ದೈಹಿಕ ಚಟುವಟಿಕೆ. ಒಂದೇ ಒಂದು ಸಲ ಭೋಜನಕೂಟದ ಆಹ್ವಾನಕ್ಕೆ ಓಗೊಟ್ಟನಂತೆ! ಆಸ್ತಿಪಾಸ್ತಿ ಸಂಸಾರದ ವೆಚ್ಚ ದಾನ ಎಲ್ಲವನ್ನೂ ಮಿತವ್ಯಯ ಧುರೀಣನಂತೆ ವಿಚಕ್ಷಣೆಯಿಂದ ರೂಢಿಸಿಕೊಂಡ. ಸಾರ್ವಜನಿಕ ಹಣವನ್ನು ತನ್ನ ಅಗತ್ಯಕ್ಕೆ ಬಳಸಿಕೊಳ್ಳುವ ದುರಾಪೇಕ್ಷೆಯಿಂದ ದೂರವಾಗಿರುವುದೇ ಇವನ ಬಾಳಿನ ಹೆಗ್ಗುರಿ. ಅಷ್ಟೇ ಅಲ್ಲದೆ ಅಂಥ ದುರುಪಯೋಗದ ಸಂಶಯ ಕೂಡ ಜನರಲ್ಲಿ ಹುಟ್ಟದಂತೆ ನಡೆದುಕೊಳ್ಳುವುದೇ ಇವನ ವ್ರತ. ಆದ್ದರಿಂದ ಮಿಥ್ಯಾರೋಪವನ್ನು ಅಡಗಿಸುವುದು ಕಷ್ಟವಾಗಲಿಲ್ಲ. ಭಾಷಣ ವೈಖರಿಯಿಂದ ಜನರನ್ನು ಒಲಿಸಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ತನ್ನ ಸದ್ಗುಣಭರಿತ ಪಾವನ ವ್ಯಕ್ತಿಬಲದಿಂದ ಅವರ ಪ್ರೀತಿ ಮೆಚ್ಚಿಗೆಯನ್ನು ಸಂಪಾದಿಸುತ್ತಿದ್ದ. ಕ್ರಿ. ಪೂ. 460 ರಿಂದ ಸುಮಾರು 30 ವರ್ಷ ಅತೆನ್ಸಿಗೆ ಹತ್ತು ಆಡಳಿತ ನಾಯಕರಿದ್ದರೂ ಇವನೊಬ್ಬನೇ ನಿಜವಾದ ವ್ಯಾವಹಾರಿಕ ನಾಯಕ ಆಗಿದ್ದ.

	ಪ್ರಜಾಪ್ರಭುತ್ವ ಎದುರಿಸಬೇಕಾದ ದೊಡ್ಡ ಸಮಸ್ಯೆ ಎಂದರೆ ಪ್ರಜೆಯ ವೈಯುಕ್ತಿಕ ಸ್ವಾತಂತ್ರ್ಯಕ್ಕೂ ರಾಷ್ಟ್ರ ಹಿತಕ್ಕೂ ಇರಬೇಕಾದ ನ್ಯಾಯತಿಷ್ಠ ಸಾಮರಸ್ಯ. ಅದನ್ನು ತನ್ನ ರಾಜಕೀಯ ಹಂಬಲಿಕೆಯನ್ನಾಗಿಸಿಕೊಂಡು ಪೆರಿಕ್ಲಿಸ್ ಅತೆನ್ಸನ್ನು ಮಾದರಿ ಆದರ್ಶ ಪ್ರಜಾಪ್ರಭುತ್ವ ರಾಷ್ಟ್ರದ ಗದ್ದುಗೆಯಲ್ಲಿ ನಿಲ್ಲಿಸಲು ಸತತವಾಗಿ ಹೆಣಗಿದ. ಗ್ರೀಸಿನ ಇತರ ಸಕಲ ರಾಷ್ಟ್ರಗಳೂ ಅತೆನ್ಸಿನಿಂದ ಪಾಠ ಕಲಿಯತಕ್ಕದ್ದು; ಅತೆನ್ಸಿನ ನೇತೃತ್ವವನ್ನು ಸಂತೋಷ ಸಂತೃಪ್ತಿಯಿಂದ ಅಂಗೀಕರಿಸತಕ್ಕದ್ದು. ಅದಕ್ಕಾಗಿ ದುಬಾರಿಯೆಂದು ತೋರಿದರೂ ಹಲವು ಅತ್ಯಾವಶ್ಯಕ ಯೋಜನೆಗಳನ್ನು ಕೈಗೊಂಡು ಯಾವುದಕ್ಕೂ ಹೆದರದೆ ಅವನ್ನು ನೆರವೇರಿಸಿದ. 

	ಜನರ ಬಹುಮತ ತನ್ನ ಕಡೆಗೆ ವಾಲಿರಲೆಂದು ಅವರಿಗಾಗಿ ಕೆಲವು ವೇತನ ಕೊಡುಗೆ ಒದಗಣೆಗಳನ್ನು ಮಂಜೂರು ಮಾಡಿದ. ವಿರೋಧ ಪಕ್ಷದ ಮಂದಗಾಮಿ ನಾಯಕ ಸೈಮನ್ ಕೋಟ್ಯಧೀಶ್ವರನಾಗಿದ್ದ. ಅವನ ಹಾಗೆ ಧಾರಾಳ ಹಸ್ತದಿಂದ ದಾನವೀಯುವ ಸಾಮಥ್ರ್ಯ ಪೆರಿಕ್ಲೀಸನಿಗೆ ಇರಲಿಲ್ಲ. ಅತೆನ್ಸಿಗೆ ನಾನಾ ರಾಷ್ಟ್ರಗಳಿಂದ ಕಪ್ಪಕಾಣಿಕೆ ಬರುತ್ತಿತ್ತು. ಆ ನಿಧಿಯಿಂದ ಪೆರಿಕ್ಲೀಸ್ ಹಣ ತೆಗೆದುಕೊಂಡು ವಿಕ್ತವರ್ಗಗಳಿಗೆ ಸೈನ್ಯ ಸೇವೆಗೆ ರುಸುಂ, ಸಮಾಜಸೇವೆಗೆ ಇನಾಮು, ಇತರ ಉಪಕಾರಗಳಿಗೆ ಬಹುಮಾನ ಇತ್ಯಾದಿ ನೆವಗಳ ಮೂಲಕ ವರಮಾನ ಕೊಡಿಸಿ ಕೊಟ್ಟ. ಸುಮಾರು 6,000 ಮಂದಿ ಒಂದು ವರ್ಷದಲ್ಲಿ ನ್ಯಾಯದರ್ಶಿಗಳಾಗಿ ಕೆಲಸ ಮಾಡುವುದು ಕಡ್ಡಾಯವಾಗಿತ್ತು. ಅವರೆಲ್ಲರಿಗೂ ವೇತನವನ್ನು ದಯಪಾಲಿಸಿದ. ಬಯಲುನಾಟಕ ಮಂದಿರದಲ್ಲಿ ಎಲ್ಲರೂ ಹಾಜರಿರಬೇಕೆಂಬ ನಿಯಮವಿತ್ತು. ಪ್ರವೇಶ ಶುಲ್ಕವನ್ನು ತೆರಲಾರದ ಬಡವರಿಗೆ ಸಾಕಾದಷ್ಟು ಮೊಬಲಗನ್ನು ರಾಷ್ಟ್ರ ನಿಧಿಯಿಂದ ಉಚಿತವಾಗಿಕೊಡಿಸಿದ.

	ಜನ ಹರ್ಷೋತ್ಸಾಹ ಹೊಂದುವುದರ ಜೊತೆಗೆ ಆದಷ್ಟು ಜ್ಞಾನವನ್ನೂ ಅರ್ಜಿಸಿಕೊಳ್ಳಬೇಕೆಂಬ ಉದ್ದೇಶದಿಂದ ಈತ ಏರ್ಪಡಿಸಿದ ಅನೇಕ ನೃತ್ಯ ನಾಟಕ ಪ್ರದರ್ಶನ ಮೆರವಣಿಗೆಗಳು ಅತಿ ಶ್ರೇಷ್ಠವಾಗಿರುತ್ತಿದ್ದುವು. ಸಾಮಾನ್ಯವಾಗಿ ಒಳ್ಳೆಯದರ ಹಿಂದೆ ಕೆಟ್ಟುದೂ ನಿಂತಿರುತ್ತದೆ. ಶ್ಲಾಘ್ಯವಾದದ್ದು ಕಿಂಚಿತ್ ದೂಷ್ಯವೂ ಆಗಬಹುದು. ದ್ರವ್ಯಾದಿಯನ್ನು ಒದಗಿಸುತ್ತ ಪೆರಿಕ್ಲೀಸ್ ಅತೆನ್ಸಿನವರನ್ನು ಸೋಮಾರಿತನ ವಿಪರೀತ ಮಾತು ಹೇಡಿತನ ಕಾಂಚನದಾಹಗಳಿಗೆ ತಳ್ಳಿ ಕೆಡಿಸಿದ ಎಂದು ಪ್ಲೇಟೊ ಆಪಾದಿಸಿದ. ಅತೆನ್ಸಿನವರ ಉತ್ತಮ ಗುಣಧರ್ಮ ಬರುಬರುತ್ತ ಕರೆಕಟ್ಟಿ ಮಲಿನವಾದದ್ದೇನೋ ದಿಟ; ಅತೆನ್ಸು ಪ್ರಮುಖ ಸ್ಥಾನದಿಂದ ಪತನಹೊಂದಿದ್ದೂ ದಿಟ. ಆದರೆ, ಆ ಪರಿಣಾಮಕ್ಕೆ ಕಾರಣ ಒಂದಲ್ಲ, ಹಲವು. ಒಂದೇ ಎಂದು ಛಲ ಹೂಡುವುದೂ ನಿರ್ಭಾಗ್ಯ. ಒಬ್ಬನನ್ನೇ ಬಲಿಪಶುವಾಗಿಸುವುದೂ ಲೋಕದ ರೀತಿ.

	ಪೆರಿಕ್ಲೀಸನೊಬ್ಬ ಕವಿ. ವಾಚ್ಯಾರ್ಥದಿಂದ ಮಾತ್ರವಲ್ಲ ವಿಶಾಲಾರ್ಥದಿಂದಲೂ ವಿಶೇಷಾರ್ಥದಿಂದಲೂ, ಘನ ಯೋಜನೆಗಳ ಕನಸುಗಾಣ್ಕೆ. ಅವುಗಳಿಗೆ ರೂಪು ಕೊಡುವ ವಿಭಾವನಾ ಕೌಶಲ್ಯ. ಅವನ್ನು ಆಗುಮಾಡಿಸಿ ಕಣ್ಣುಮುಂದೆ ನಿಲ್ಲಿಸುವ ಕಾರ್ಯಚಾತುರ್ಯ-ಎಲ್ಲದರಲ್ಲೂ ಈತ ಎತ್ತಿದ ಕೈ. ಅತೆನ್ಸು ತನ್ನ ನೈಸರ್ಗಿಕ ಸೌಂದರ್ಯವನ್ನು ಮಾನವಿಕ ಕಲಾ ಸೌಂದರ್ಯದಿಂದ ಪರಿಪೂರ್ಣಗೊಳಿಸಬೇಕೆಂಬುದು ಇವನ ಆಶಯವೂ ಹೌದು. ಸಂಕಲ್ಪವೂ ಹೌದು. ಸೌಂದರ್ಯವೆಂದರೆ ಸಾಧಾರಣ ಅಂದಚಂದವಲ್ಲ, ಮಧ್ಯಮತೆಯ ಲಾವಣ್ಯವೂ ಅಲ್ಲ. ಕಣ್ತುಂಬ ನೋಡಿ ಪರಿಭಾವಿಸಲರ್ಹವಾದ ಎತ್ತರದ ಭವ್ಯತೆ. ದೇವಕನ್ಯೆ ಅತೀನಿಯ ದೇವಸ್ಥಾನ, ಅತೀನಿ ಪೋಸೈಯ್ಡಾನ್ ಎರಿಕ್ತಿಯಸ್ ಮೂವರ ದೇವಾಲಯಗಳು. ಆಕ್ರೊಪೋಲಿಸ್ ದುರ್ಗದ ಮೊಗಸಾಲೆ, ಓಡಿಯಮ್ ಎಂಬ ಸಂಗೀತ ಮಂದಿರಗಳು-ಇವು ಪ್ರಪಂಚದ ಕೌತುಕಗಳಾಗಿ ಮೂರ್ತಗೊಂಡುವು. ಮಹಾಶಿಲ್ಪಿ ಫಿಡಿಯಸ್ ಆ ಕಾಲದ ಜಕಣಾಚಾರಿಯಾಗಿದ್ದ. 

	ನಗರ ರಕ್ಷಣೆಯನ್ನು ಸುಭದ್ರಗೊಳಿಸುವುದಕ್ಕೆ ಪೆರಿಕ್ಲೀಸ್ ಭಾರೀ ಕೋಟೆ ಗೋಡೆಗಳನ್ನು ಕಟ್ಟಿಸಿದ. ನಾವಿಕರ ತರಬೇತಿಗಾಗಿ 60 ನೌಕೆಗಳು ವರ್ಷಕ್ಕೆ ಎಂಟು ತಿಂಗಳು ಸಮುದ್ರದಲ್ಲಿ ಓಡಾಡುವಂತೆ ಮಾಡಿದ. ಮಿತ್ರ ರಾಷ್ಟ್ರಗಳು ಕೊಡುತ್ತಿದ್ದ ವಾರ್ಷಿಕ ದ್ರವ್ಯವನ್ನು ಅತೆನ್ಸೊಂದರ ಉನ್ನತಿಗಾಗಿ ಖರ್ಚು ಮಾಡಿದನೆಂಬ ದೂರನ್ನು ಇವನ ಮೇಲೆ ಹೇರಲಾಯಿತು. ಜಗ್ಗದೇ ಹೀಗೆ ವಾದಿಸಿದ; ಹೊರಶತ್ರುಗಳಿಂದ ತಮ್ಮನ್ನು ಕಾಪಾಡಬೇಕೆಂದು ಎಲ್ಲ ರಾಷ್ಟ್ರಗಳು ಒಮ್ಮತದಿಂದ ಅತೆನ್ಸನ್ನು ಬೇಡಿಕೊಂಡಿವೆ; ಅದೇ ಡೀಲಿಯನ್ ಒಪ್ಪಂದ. ಅವು ಪ್ರತಿಯಾಗಿ ಹಣ ಸಲ್ಲಿಸಬೇಕಲ್ಲವೆ, ರಕ್ಷಣೆಯ ಮಜೂರಿಯಾಗಿ, ರಾಷ್ಟ್ರಗಳನ್ನು ಸಂರಕ್ಷಿಸುವ ಅತೆನ್ಸು ತಾನೇ ಅತ್ಯಂತ ಬಲ ಸಮೃದ್ಧವಾಗಿರಬೇಕಲ್ಲವೇ? ಅತೆನ್ಸು ಒಂದು ರೀತಿಯ ಸಾಮ್ರಾಜ್ಯ. 

	ದಢೂತಿಯಾಗಿ ಬೆಳೆದಿದ್ದ ಪರ್ಷಿಯ ಚಕ್ರಾಧಿಪತ್ಯ ಗ್ರೀಸಿನ ಪುಟ್ಟ ನಗರ ರಾಷ್ಟ್ರಗಳನ್ನು ಕಬಳಿಸಲು ಸದಾ ಹೊಂಚು ಹಾಕುತ್ತಿತ್ತು. ಆ ರಾಷ್ಟ್ರಗಳಿಗೆ ತಮ್ಮೊಳಗಣ ಒಕ್ಕೂಟವೊಂದೇ ಬದುಕುವ ಮಾರ್ಗವೆಂಬುದನ್ನು ಎಲ್ಲರೂ ಮನಗಂಡಿದ್ದರು. ಒಕ್ಕೂಟಕ್ಕೂ ನೇತಾರ ಒಬ್ಬ ಬೇಕು. ಆ ಗೌರವ ಸಹಜವಾಗಿಯೂ ನ್ಯಾಯವಾಗಿಯೂ ಅತೆನ್ಸಿಗೆ ಸಲ್ಲಬೇಕಾದದ್ದು ಸಂದುಬಂತು. ಅತೆನ್ಸನ್ನು ಬಲಪಡಿಸುವ ಉದ್ದೇಶದಿಂದ ಹಲವು ಪಟ್ಟಣಗಳನ್ನು ಅದರ ಹತೋಟಿಗೆ ಪೆರಿಕ್ಲೀಸ್ ಒಳಪಡಿಸಿದ. ಸ್ಪಾರ್ಟಾ ರಾಷ್ಟ್ರಕ್ಕೆ ಕಣ್ಣುರಿ ತಂದಿತು. ಕಿರುಕುಳ ಉಂಟುಮಾಡುವ ಕೆಲಸಕ್ಕೆ ಸ್ಪಾರ್ಟಾ ಕೈಹಾಕಿ, ಸ್ವಲ್ಪ ಲಾಭ ಬಹಳ ನಷ್ಟ ಹೊಂದಿ ಕಾರಿನ್ತು ತೀಬ್ಸ್ ಮೇಗಾರ ಮೊದಲಾದುವುಗಳ ನೆರವಿನಿಂದ ಕ್ರಿ. ಪೂ. 31ರಲ್ಲಿ ಯುದ್ಧವನ್ನೇ ಹೂಡಿತು. ಯತ್ನವಿಲ್ಲದೇ ಅತೆನ್ಸು ಸಮರರಂಗಕ್ಕೆ ನಡೆಯಬೇಕಾಯಿತು. ನೆಲ ಕಾಳಗದಲ್ಲಿ ಸ್ಪಾರ್ಟಾ ಅಜೇಯ ಎಂಬುದನ್ನು ಅರಿತಿದ್ದ ಪೆರಿಕ್ಲೀಸ್ ನೌಕೆಗಳ ಮೂಲಕ ದಂಡಯಾತ್ರೆ ಹೂಡಿ ಸ್ಪಾರ್ಟಾದವರನ್ನು ಸ್ಪಾರ್ಟಾ ಪಕ್ಷಪಾತಿಗಳನ್ನು ಬಗ್ಗುಬಡಿದ. ಹೊರಗಣ ಬಯಲಿನ ರಕ್ಷಣೆಗೆ ಹಾತೊರೆಯದೆ ಅತೆನ್ಸು ದುರ್ಗವನ್ನು ಬಾಧೆಗೀಡಾಗದಂತೆ ನೋಡಿಕೊಂಡ. ಅತೆನ್ಸಿನಲ್ಲಿ ಜನಸಂದಣಿ ಅತಿಶಯವಾದ್ದರಿಂದಲೂ ಈಜಿನಾ ಪ್ರಾಂತ್ಯದವರನ್ನು ದಂಡಿಸಬೇಕಾದ್ದರಿಂದಲೂ ಅಲ್ಲಿನವರೆಲ್ಲರನ್ನೂ ದೇಶಭ್ರಷ್ಟರನ್ನಾಗಿಸಿ ಅಲ್ಲಿಗೆ ಅತೆನ್ಸಿನವರನ್ನು ಕಳಿಸಿ ಒತ್ತಡವನ್ನು ನಿವಾರಿಸಿದ. ಸ್ಪಾರ್ಟಾ ಪಡೆ ಬಸವಳಿದು ಆಟಿಕವನ್ನು ಬಿಟ್ಟು ಹೊರಟ ಮೇಲೆ ಪೆರಿಕ್ಲೀಸ್ ಅತೆನ್ಸಿನ ದಂಡನ್ನು ಮೆಗರಾ ಭೂಮಿಗೆ ನುಗ್ಗಿಸಿ ಅದನ್ನು ನಾಶಮಾಡಿದ. ಹೀಗೆ ಚಲನ ತಾಟಸ್ಥ್ಯ ಎರಡನ್ನೂ ಸೂಕ್ತವಾಗಿ ಉಪಯೋಗಿಸಿಕೊಂಡು ವಿಜಯ ಅತೆನ್ಸಿನ ಕಡೆಗೆ ವಾಲುವಂತೆ ಮಾಡಿದ. ಆದರೆ, ಅತೆನ್ಸಿನವರಂಥ ಚಂಚಲ ಚಿತ್ತದವರು ಬೇರೆ ಎಲ್ಲಿಯೂ ಇರಲಿಲ್ಲ. ಅನಪೇಕ್ಷಿತ ಯುದ್ಧವನ್ನು ಪ್ರಾರಂಭಿಸಿದ ಸ್ವಾರ್ಥಿ ಎಂಬ ಆರೋಪವನ್ನು ಪೆರಿಕ್ಲೀಸನ ತಲೆಗೆ ಕಟ್ಟಿ ಜುಲ್ಮಾನೆ ವಿಧಿಸಿದರು. ಮರುಗಳಿಗೆಯೇ ಪಶ್ಚಾತ್ತಾಪದಿಂದ ಕುಗ್ಗಿ ಹೋಗಿ ಪುನಃ ಅವನನ್ನೇ ಸ್ಟ್ರಾಟಿಗಸ್ ಆಗಿ ಚುನಾಯಿಸಿದರು; ಅಸ್‍ಪ್ಯಾಸಿಯ ಹೆತ್ತುಕೊಟ್ಟಿದ್ದ ಮಗನನ್ನು ತನ್ನ ಉತ್ತರಾಧಿಕಾರಿ ಮಾಡಿಕೊಳ್ಳಲು ಅವನಿಗೆ ಕಾಯಿದೆ ಪ್ರಕಾರ ಅನುಮತಿ ಇತ್ತರು. ಜೀವನದ ಅನಿಶ್ಚಿತತೆಗಳಿಂದ ಬೇಸರಗೊಂಡಿದ್ದ ಪೆರಿಕ್ಲೀಸ್ ಲವಲವಿಕೆ ಕಳೆದುಕೊಂಡು ದೈವಾಧೀನನಾದ. ಸಾಯುವಾಗ ತನ್ನ ಸಾಹಸ ಕಾರ್ಯಗಳನ್ನು ಉಗ್ಘಡಿಸುತ್ತಿದ್ದ ಸ್ನೇಹಿತಸಮೂಹಕ್ಕೆ ತನ್ನ ಹಿರಿಯ ಸಾಹಸವೇನೆಂಬುದನ್ನು ತಾನೇ ವಿವರಿಸಿದ: "ನನ್ನಿಂದ ಯಾವೊಬ್ಬ ಅತೆನ್ಸು ಪ್ರಜೆಯೂ ಕರಿವಸ್ತ್ರ ಹೊದೆಯುವಂತಾಗಲಿಲ್ಲ". 

	ಪೆರಿಕ್ಲೀಸನ ಜೀವನ ವಿಜಯಕ್ಕೆ ಅವನ ಮೇಧಾವಿತನ ಮತ್ತು ವಾಕ್‍ಶಕ್ತಿ ಎರಡೂ ಕಾರಣ. ಅನಾಕ್ಸಗೊರಸನ ಶಿಷ್ಯವೃತ್ತಿಯಿಂದ ಅವನಿಗೆ ಮಹಾತತ್ತ್ವಗಳೂ ಜ್ಞಾನವೆಂಬುದರ ಲಕ್ಷಣ ತಾತ್ಪರ್ಯ ಪ್ರಯೋಜನಗಳ ಅನುಭವವೂ ಚೆನ್ನಾಗಿ ಮನದಟ್ಟಾಗಿತ್ತು. ಕಲೆ ದರ್ಶನ ಚರಿತ್ರೆ ಸಾಹಿತ್ಯ ಎಲ್ಲದರಲ್ಲೂ ನಿಷ್ಣಾತರಾದವರ ಸಂಪರ್ಕದಿಂದ ಅವನ ಆಂತರ್ಯ ಮಹೋನ್ನತ ಭಾವಭಾವನೆಗಳ ಉಗ್ರಾಣವಾಗಿತ್ತು. ಭಾಷಣ ವಿದ್ಯೆಯನ್ನು ಆತ ಶ್ರಮವಹಿಸಿ ಕಲಿತಿದ್ದ. ಅಭಿಪ್ರಾಯ ಮಹತ್ತ್ವ ಕಲಾತ್ಮಕ ಪರಿಪೂರ್ಣತೆ ಎರಡೂ ಕೂಡಿಕೊಂಡು ಅವನನ್ನು ಹಿರಿಯ ವಾಗ್ಮಿಗಳ ಸಹಪಂಕ್ತಿಗೆ ಕರೆದೊಯ್ದಿದ್ದುವು. ಯಾರನ್ನೂ ಮನ್ನಿಸದೆ ಗೇಲಿಗೆ ಗುರಿಮಾಡುತ್ತಿದ್ದ ವಿನೋದ ನಾಟಕಕಾರರು ಪೆರಿಕ್ಲೀಸನಿಗೆ ಅಮಿತ್ರರಾಗಿಯೇ ಇದ್ದರೂ ಅವನ ಮಾತುಗಾರಿಕೆಗೆ ಮಾರುಹೋದರು. ಕ್ರಾಟಿನಸ್ಸನ ಅಭಿಮತದಂತೆ `ಪೆರಿಕ್ಲೀಸನದು ಗ್ರೀಕ್ ನಾಲಗೆಗಳಲ್ಲಿ ಪರಮ ಶ್ರೇಷ್ಠವಾದದು ಯೂಪೋಲಿಸ್ಸನ ಹೇಳಿಕೆಯಂತೆ `ಮನಒಪ್ಪಿಸುವಿಕೆ ಅವನ ತುಟಿಗಳ ತುದಿಯಲ್ಲೇ ಕುಳಿತಿತ್ತು. ಅಷ್ಟೊಂದು ಅವನ ಮೋಹಕತೆ. ಅರಿಸ್ಟೊಫೆನೀಸಿನ ವರ್ಣನೆಯಂತೆ ಪೆರಿಕ್ಲೀಸ್ ಮಿಂಚುತ್ತಿದ್ದ ಗುಡುಗುತ್ತಿದ್ದ. ಪ್ರತಿಯೊಂದು ಭಾಷಣಕ್ಕೂ ಎಚ್ಚರಿಕೆಯಿಂದಲೂ ಪ್ರಯತ್ನಪೂರ್ವಕವಾಗಿಯೂ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಅದೇತಕ್ಕೊ ಯಾವ ಭಾಷಣವನ್ನೂ ಅವನು ಬರೆದಿಡಲಿಲ್ಲ; ಅಥವಾ ಆ ಬರವಣಿಗೆ ನಷ್ಟವಾಗಿ ಹೋಗಿದೆಯೋ ಏನೊ. ಮಾತನಾಡಲು ಹೇಳುವುದಕ್ಕೆ ಮುನ್ನ, ತನ್ನ ಬಾಯಿಂದ ಒಂದು ಅನುಚಿತ ನುಡಿಯೂ ಹೊರಬರದಿರಲೆಂದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದನಂತೆ; ಅಳಿದುಳಿದು ಬಂದಿರುವ ಅವನ ವಾಕ್ಯಗಳಲ್ಲಿ ಅಗಾಧ ವಿಭಾವನೆ ರಾಗೋತ್ಸಾಹ ಮಾಗಿದ ಕಲಾವಂತಿಕೆ ಕಂಗೊಳಿಸುತ್ತದೆ. ಕದನದಲ್ಲಿ ಬಿದ್ದುಹೋದವರನ್ನು ಕುರಿತು ಅವನ ಅನುತಾಪ; `ನಗರದಿಂದ ಯೌವನ ಕಣ್ಮರೆಯಾಗಿದೆ, ಸಂವತ್ಸರದಿಂದ ವಸಂತ ಸಮಯ ಮುಗಿದು ಹೋದಂತೆ. ಈಜಿನಾ ದ್ವೀಪ `ಒಲಂಪಸ್ ಬೆಟ್ಟದ ಉತ್ತರ ಇಳಿಜಾರಿಗೊಂದು ಕಣ್ಣ ಬೇನೆ.  `ಪೆಲಪನೀಸಸ್ ನೆತ್ತಿಯ ಮೇಲೆ ರಣದ ಕಾರ್ಮೊಡ ಇಳಿಯುತ್ತಿದೆ.-ಇವು ಇವನ ಭಾವುಕ ಮಾತುಗಾರಿಕೆಗೆ ಒಂದೆರಡು ನಿದರ್ಶನಗಳು. ಅವನ ಮೂರು ಭಾಷಣಗಳನ್ನು ಚರಿತ್ರಕಾರ ತೂಸಿಡಿಡೀಸ್ ವರದಿ ಮಾಡಿದ್ದಾನೆ. ಅವುಗಳಲ್ಲಿ ಒಂದು ರಣಾಂಗಣದಲ್ಲಿ ಮಡಿದವರ ನೆನಪಿಗಾಗಿ ಮಾಡಿದ್ದು. ಅದಕ್ಕೆ ಸೀಮಾತೀತ ಪ್ರಶಂಸೆ ಸಂದಿದೆ; `ಪ್ರಪಂಚವೇ ಮಹೋತ್ತಮ ಪುರುಷರ ಸಮಾಧಿ ಮುಂತಾದ ಬಿಡಿಮಾತುಗಳಿಂದ ಹಿಡಿದು ಒಟ್ಟಾರೆ ಕಟ್ಟಡದವರೆಗೂ ಪ್ರಥಮ ದರ್ಜೆಯ ಭಾಷಣಕಾರನ ದನಿ ಸ್ಪುಟವಾಗಿ ಅದರಲ್ಲಿ ಕೇಳಿಬರುತ್ತದೆ. ಪ್ರಾಚೀನ ಗ್ರೀಸಿನ ಇತಿಹಾಸ ವೈಭವ ಮಹಾತ್ಮೆಗಳ ಭಟ್ಟಿ ಅದು. 

ಈಸ್ಕಿಲಸ್ ಸಾಫೊಕ್ಲೀಸ್ ಯೂರಿಪಿಡೀಸ್ ಕ್ರಾಟಿನಸ್ ಕ್ರೇಟೀಸ್ ಅನಾಕ್ಸ ಗೊರಸ್ ಜೀನೊ ಪ್ರೊಟಗರಸ್ ಸಾಕ್ರಟೀಸ್ ಮೆಟಾನ್ ಪಾಲಿಗ್ನೋಟಸ್ ಫೀಡಿಯಸ್ ಮೈರಾನ್ ಹೀರಡಟಸ್ ಹಿಪೊಕ್ರೇಟಿಸ್ ಪಿಂಡರ್ ಪಾಲಿಕ್ಲೀಟಸ್ ಸಂಪಿಡಾಕ್ಲೀಸ್ ಡೆಮಕ್ರೆಟಿಸ್-ಎಲ್ಲರೂ ಘನತೆವೆತ್ತವರು, ತಮ್ಮ ತಮ್ಮ ಕಲೆಗಳಲ್ಲಿ ಪರಮಪೂಜ್ಯರು; ಅವರೆಲ್ಲರೂ ಪೆರಿಕ್ಲೀಸನ ಸಮಕಾಲೀನರು. ಅಂಥ ತಾರಾಪುಂಜಕ್ಕೆ ಮುಖ್ಯ ನಕ್ಷತ್ರವಾಗಿದ್ದ ಪೆರಿಕ್ಲೀಸನ ಹೆಸರು ಆ ಅವಧಿಗೆ ವಿನಿಯೋಗವಾಗಿರುವುದು ತರ್ಕಸಮ್ಮತ, ವಿಹಿತ. ಪುರಾತನ ಗ್ರೀಸಿನ ರಾಷ್ಟ್ರಗಳಿಗೆ ಅತೆನ್ಸು ವೈರಮುಡಿ; ಅತೆನ್ಸಿನ ಇತಿಹಾಸದಲ್ಲಿ ಪೆರಿಕ್ಲೀಸನ ಕಾಲ ಸುವರ್ಣಯುಗ.
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ